Tuesday, 12 September 2017

Jambur name in Hero Stone @maythammana muchudi

ಇದು ಶಿಕಾರಿಪುರ ತಾಲೂಕಿನ ಮಾಯಿತಮ್ಮನ ಮುಚಡಿಯಲ್ಲಿರುವ ವೀರಗಲ್ಲು.

ಕ್ರಿ.ಶ.1127 ರ ಅವಧಿಯಲ್ಲಿ ಚಾಲುಕ್ಯರ ಸೋಮೇಶ್ವರನು ರಾಜ್ಯವಾಳುತ್ತಿದ್ದ ಸಮಯವದು.ಸಂತರ ದೊರೆ ಸಿಂಗರಸನು ಹಿರಿಯ ಜಂಬೂರಿನ (ನನ್ನೂರು)ಮೇಲೆ ದಾಳಿ ನಡೆಸಿ ಗೋವುಗಳನ್ನು
ಅಪಹರಿಸಿ ಹೋಗುತ್ತಿರುವಾಗ.. ಈ ಮುಚುಂಡಿ ಗ್ರಾಮದ ರಣಹುಲಿ ಎಂದೆನಿಸಿದ " ಸಾದೆಯ ನಾಯಕ" ನು ಸಿಂಗರಸನೊಂದಿಗೆ ಹೋರಾಡಿ ಹಸುಗಳನ್ನ ಹಿಂದಿರುಗಿಸುವಲ್ಲಿ ಯಶಸ್ವಿ ಆದರೂ ಕೊನೆಗೆ ವೀರಸ್ವಗ೯ ಸೇರಿದ.

ನನ್ನೂರಿನ ಹಸುಗಳು ಮತ್ತೆ ನನ್ನೂರಿಗೆ ಬರುವಲ್ಲಿ ಜೀವಕೊಟ್ ಸಾದೆಯ ನಾಯಕನಿಗೆ ಒಂದು ಶರಣು
ಹೇಳಿ ಬಂದೆ..

Monday, 24 July 2017

ಮಳವಳ್ಳಿ ಶಾಸನ

ಮಳವಳ್ಳಿ ಶಾಸನದ ವಿಶೇಷತೆಗಳು..

ಶಿಕಾರಿಪುರ ತಾಲೂಕಿನ ಮಳವಳ್ಳಿ ಗ್ರಾಮದಲ್ಲಿರುವ ಆರು ಮುಖದ ಕೆತ್ತನೆ ಹೊಂದಿರುವ ಸ್ಥಂಭ ಶಾಸನ ನಿಜಕ್ಕೂ ಹಲವು ವಿಶೇಷತೆಗಳನ್ನು ತನ್ನಲ್ಲಿ ಹೊತ್ತು ನಿಂತಿದೆ.

ಇದರಲ್ಲಿ ಎರಡು ಅವಧಿಯಲ್ಲಿ ಬದಲಾದ ಎರಡು ಸಾಮ್ರಾಜ್ಯದ ಇಬ್ಬರು ಅರಸರು ಶಾಸನ ಬರೆಸಿದ್ದಾರೆ.

#ಸುಮಾರು ಕ್ರಿ.ಶ 150 ರ ಅವಧಿಯಲ್ಲಿ ವೈಜಯಂತಿಪುರದ (ಬನವಾಸಿ) ರಾಜ ವಿಣ್ಣುಕುಡಚುಟುಕುಲಾನಂದ ಶಾತಕರ್ಣಿಯು ಸಹಲಾಟವಿ ಎಂಬ ಗ್ರಾಮವನ್ನು ಮಳವಳ್ಳಿ ಗ್ರಾಮದ ದೇವರಿಗೆ ದಾನ ನೀಡಿದ್ದಾನೆ, ಕೌಂಡಿನ್ಯ ಗೋತ್ರದ ಹಾರತೀ ಪುತ್ರನಾದ "ಕುಂದಮಾನ " ಎಂಬ ವಿಪ್ರನು ಈ ದಾನ ಸ್ವೀಕರಿಸಿದ್ದಾನೆ.

#ಈ ವಿವರನ್ನು ಸ್ಥಂಭ ಶಾಸನದ ಎರಡು ಮುಖಗಳಲ್ಲಿ ಮಾತ್ರ ಖಂಡರಿಸಲಾಗಿದೆ.

ಇಲ್ಲಿ ಬಳಸಿರುವ #ಮಹಾವಲ್ಲಭರಜ್ಜುಂಕ ಎಂಬ ಶಬ್ದದ ಉಲ್ಲೇಖ.ಇದು ಬಹಳ ವಿಶೇಷವಾಗಿದ್ದು ಕ್ರಿ.ಪೂ. ಅಶೋಕನ ಅವಧಿಯಲ್ಲಿನ ವಿಶೇಷ ಕಂದಾಯ ಅಧಿಕಾರಿಗಳು ಎಂಬುವುದನ್ನು ಸೂಚಿಸುತ್ತದೆ.

ಮೊದಲ ಬಾರಿಗೆ " # ಉಕ್ತಂ ಖಣ್ಡೋ ವಿಶ್ವಕಮ್ಮಾ " ಎಂಬ ಪದದ ಉಲ್ಲೇಖವು ವಿಶೇಷವಾಗಿದೆ. ಸುಮಾರು ಒಂದು ಸಾವಿರದ ಎಂಟನೂರು ವರುಷಗಳ ಹಿಂದೆ "ವಿಶ್ವಕರ್ಮ " ಎಂಬ ಪದದ ಉಲ್ಲೇಖ ಗಮನ ಸೆಳೆಯುತ್ತದೆ.

 ಶ್ರೀಯುತ ಷ. ಶೆಟ್ಟರ್ ರವರ ಪ್ರಕಾರ "ವಿಶ್ವಕರ್ಮ " ಎಂಬ ಪದದ ಬಳಕೆಯು ಒಂದು ಹೊಸ ಮೈಲಿಗಲ್ಲು. ಪ್ರಾಚೀನರ    ಬ್ರಾಹ್ಮೀ -ಪಾಕೃತ ಮಾಧ್ಯಮದಿಂದ ಹೊರಬರಲು ಭಾಷೆ ಮತ್ತು ಲಿಪಿ ಪ್ರಾರಂಭಿಸಿದ ಹೆಗ್ಗರುತು ಇದಾಗಿದೆ.

ಸುಮಾರು ಕ್ರಿ.ಶ 250-300 ರ ಅವಧಿಯಲ್ಲಿ ಬನವಾಸಿ ರಾಜ್ಯವನ್ನು ಕದಂಬರ "ಶಿವ..ವರ್ಮ" ಎಂಬ ರಾಜನು ಆಳುತ್ತಿದ್ದು ಆತನು ಮಾನವ್ಯಗೋತ್ರದ ಹಾರತೀ ಪುತ್ರನಾಗಿದ್ದು ಮಳವಳ್ಳಿ ಗ್ರಾಮದ ಕೌಂಡಿನ್ಯ ಗೋತ್ರದ ಕೌಸಕೀ ಪುತ್ರನಾದ ಕುಂದಮಾನ ವಂಶದ ನಾಗದತ್ತ ಎಂಬ ವಿಪ್ರನಿಗೆ ಹಿಂದೆ ವಿಣ್ಣುಕುಡಚುಟುಕುಲಾನಂದ ನೀಡಿದ್ದ ಸಹಲಾ ಗ್ರಾಮದ ಜೊತೆ ಇನ್ನೂ ಹಲವು ಗ್ರಾಮಗಳನ್ನೂ ಸಹ ದಾನ ನೀಡಲಾಗಿದೆ.

ಇಲ್ಲಿ "ಶಿವ...ವರ್ಮ" ಕದಂಬರ ರಾಜ ಎನ್ನಲಾಗಿದ್ದು ಮಾನವ್ಯಗೋತ್ರದ ಹಾರತೀ ಪುತ್ರ ಎಂದು ಪ್ರಸ್ತಾಪಿಸಲಾಗಿದೆ. ಇತ್ತೀಚಿಗೆ "ಶಿವ...ವರ್ಮ" ''ಮಯೂರವರ್ಮ " ಎಂಬುದಾಗಿ ವಿಶ್ಲೇಷಿಸಲಾಗಿದೆ.

#ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವಿಣ್ಣುಕುಡಚುಟುಕುಲಾನಂದ ದೊರೆ ಹಾಗೂ ಮಯೂರ ಇಬ್ಬರೂ ಮಾನವ್ಯಗೋತ್ರದ ಹಾರತೀ ಪುತ್ರರಾಗಿದ್ದಾರೆ.

#ಇಬ್ಬರೂ  "ಕುಂದಮಾನ" ವಂಶದ ಬ್ರಾಹ್ಮಣರಿಗೇ ದಾನ ನೀಡಿದ್ದಾರೆ.

#ವಿಣ್ಣುಕುಡಚುಟುಕುಲಾನಂದನ ಮೊದಲ ಶಾಸನ ಸ್ಥಂಭದಲ್ಲೇ ಇನ್ನೆರೆಡು ಮುಖಗಳಲ್ಲಿ ಮಯೂರನೂ ಶಾಸನ ಕೆತ್ತಿಸಿದ್ದಾನೆ.

#ಒಂದೇ ಶಾಸನ ಕಲ್ಲಿನಲ್ಲಿ ಇಬ್ಬರು ರಾಜರು ಶಾಸನ ಕೆತ್ತಿಸಿರಲು ಕಾರಣ ಏನಿರಬಹುದು?

ಎರಡೂ ಸಮಯದಲ್ಲಿ ಪ್ರಸ್ತಾಪವಾಗುತ್ತಿರುವ  "ಸಹಲಾ'' ಎಂಬ ಗ್ರಾಮವು ಈಗಿನ ತಡಗಣಿ ಎಂದು ಹಲವು ಇತಿಹಾಸಕಾರರ ಅಭಿಪ್ರಾಯ. ಅದಕ್ಕೆ ಕಾರಣ ತಡಗಣಿ ಗ್ರಾಮದ ಶಾಸನದಲ್ಲಿ "ಶ್ರೀಮದುವರ್ಮ್ಮಾಶತೋಮಹಿಲಗ್ರಾಮ'' ಎಂಬ ಉಲ್ಲೇಖ.

# ಈ ಶಾಸನದಲ್ಲಿ ಉಲ್ಲೇಖಿತ ಇತರ ಗ್ರಾಮಗಳೆಂದರೆ:

ಸೋಮಪಟ್ಟಿ, (ಸೋಮನಹಳ್ಳಿ ?)
ಕೊಂಗಿಣಿಗಾರಂ (ಕೋಲ್ಗುಣಿಸಿ?)
ಮರಿಯಸ (?)
ಕರಿಪೆನ್ದೂಲ ( ಕರಿನೆಲೆ - ಕರ್ನಲ್ಲಿ)
ಪರ ಮುಚ್ಚುಣ್ಡೀ ( ಅಗ್ರಹಾರ ಮುಚಡಿ)
ಕುನ್ದ ಮುಚ್ಚುಣ್ಡೀ (ಮಾಯಿ ತಮ್ಮನ ಮುಚಡಿ)
ಕಪ್ಪೆನಾಲ (ಕುಪ್ಪೆಲೂರು)
ಕುನ್ದತಪುರಂ (ಸ್ಥಾನ ಕುಂದಪುರ-ತಾಳಗುಂದ)
ವೆಟ್ಟಕ್ಕಿ (?)
ವೇಗೂರಂ (ಬೇಗೂರು)
ಕೊಣತಪುಕಂ (ಕುಣೆತೆಪ್ಪ)
ಎಕ್ಕದ್ಧಾಹಾರಂ  (?)

EC - VII -sk -264

" ರಮೇಶ ಬಿ ಹಿರೇಜಂಬೂರು"

Sunday, 19 March 2017

12 century old impartant inscription from talagunda

ಸುಮಾರು 98 ಸಾಲಿನ ಬೃಹತ್ ಶಾಸನ ...

ಕ್ರಿ.ಶ 1160ರ ಅವಧಿಯ "ಕೇಶವ ದಂಡನಾಯಕನ " ಶಾಸನವಿದು. ರೇಚರಸನ ಧರ್ಮ ಪ್ರಸಂಗದಿಂದಾಗಿ ತಾಳಗುಂದದ ಪಂಚ ತೀರ್ಥದ ಸನ್ನಿದಾನದಲ್ಲಿ "ಭೂದಾನ , ವಿದ್ಯಾದಾನ ಮತ್ತು ಅನ್ನದಾನಗಳ ಮಹತ್ವ ತಿಳಿಸಿ, ಆ ವಿಧವಾದ ಧಾನಗಳನ್ನು ಪರಿಪರಿಯಾಗಿ ವಿವರಿಸುತ್ತಾ ನೀಡಿದ " ದಾನ ಕೃತಿ ಈ ಶಾಸನ.

  ತಾಳಗುಂದದ ನೆಲದ ಪವಿತ್ರತೆಯನ್ನು ಎಳೆ ಎಳೆಯಾಗಿ ವಿವರಿಸುತ್ತಾ.. ಇಲ್ಲಿನ ಪಕ್ಷಿ ಸಂಕಲುಗಳೂ ಅಂದು ಶ್ಲೋಕಗಳನ್ನ ಕಲಿತಿದ್ದವು.... ಅವುಗಳೂ ಪಠಿಸುತ್ತಿದ್ದ ಮಾಹಿತಿ ತಿಳಿಸುತ್ತದೆ.

      ದೇವರ ಅಭಿಶೇಕವನ್ನು ಹೇಗೆ ಮಾಡಬೇಕೆಂಬ ವಿವರಣೆ ಈ ಶಾಸನದಲ್ಲಿದೆ. ಕಳಸ ಪ್ರತಿಷ್ಟಾಪನೆ , ಅವುಗಳಲ್ಲಿ ತುಂಬಬೇಕಾದ ದ್ರವ, ದ್ರವ್ಯಗಳು, ಅವುಗಳ ಪೂಜಾ ವಿಧಾನ
ಮೆರವಣಿಗೆ , ಆ ಸಮಯದಿ ಘಂಟಾ ಘೋಷಗಳು, ನಂತರ ಪ್ರಸಾದ. ಪ್ರಸಾದವನ್ನು ಹೇಗೆ ತಯಾರಿಸಬೇಕು , ಪ್ರಸಾದಕ್ಕೆ ಯಾವ ಯಾವ ಪದಾರ್ಥಗಳನ್ನು ಉಪಯೋಗಿಸಬೇಕೆಂಬುದರ ಉಲ್ಲೇಖಗಳು ಇವೆ.

    12ನೇ ಶತಮಾನದಲ್ಲಿ ತಾಳಗುಂದದಲ್ಲಿದ್ದ ಸಂಪೂರ್ಣ ಶಿಕ್ಷಣ ವ್ಯವಸ್ಥೆಯ ಚಿತ್ರಣವನ್ನು ಕಟ್ಟಿಕೊಡುವ ಈ ಶಾಸನ
ಇಲ್ಲಿನ  ವಿವಿಧ ಅಧ್ಯಯನ ವಿಷಯಗಳ ಖಂಡಿಕೋಪಾಧ್ಯಯರ ವಿವರಣೆ ನೀಡುತ್ತದೆ. ಆ ವೇಳೆಯಲ್ಲಿ ತಾಳಗುಂದದಲ್ಲಿ " ಕನ್ನಡ ಅಕ್ಕರ ಶಿಕ್ಷಣ " ಇದ್ದು , ಅದಕ್ಕಾಗಿಯೇ ಪ್ರತ್ಯೇಕವಾಗಿ ಒಬ್ಬ ಕನ್ನಡದ ಉಪಾಧ್ಯಾಯ ಇದ್ದುದಾಗಿ ಮಾಹಿತಿ ನೀಡುತ್ತದೆ.

ಇಲ್ಲಿನ ಶಿಕ್ಷಣಾರ್ಥಿಗಳಿಗೆ ಹಾಗೂ ಖಂಡಿಕೊಪಾಧ್ಯಾರಿಗೆ ಅಡುಗೆ ಮಾಡಲು , ತಾಂಬೂಲ ತಿನಿಸಲು, ಅವರ ಉಗುರುಗಳನ್ನು ತೆಗೆಯಲು " ಪ್ರತ್ಯೆಕ " ಸೇವಕರಿರುವುದನ್ನು
ಸೂಚಿಸುತ್ತದೆ.

First Kannada inscription

ಕನ್ನಡದ ಮೊದಲ ಶಾಸನ : ತಾಳಗುಂದ ಶಾಸನ ಒಂದು ಕಿರು ನೋಟ

ಕನ್ನಡ ಭಾಷೆಯ ಲಿಖಿತ ಶಾಸನೋಕ್ತ ಪ್ರಾಚೀನತೆಯನ್ನು ಹಲ್ಮಿಡಿ ಶಾಸನಕ್ಕಿಂತಲೂ ಸುಮಾರು 80 ವರುಷಗಳ ಕಾಲ ಹಿಂದಕ್ಕೆ ಒಯ್ಯುವ ಮೂಲಕ ಕನ್ನಡ ಭಾಷೆಯ ಪ್ರಾಚೀನತೆಯನ್ನು ಇನ್ನಷ್ಟು ದೃಢಪಡಿಸಿದ ಶಾಸನ : ತಾಳಗುಂದ ಶಾಸನ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತಾಳಗುಂದದ ಶ್ರೀ ಪ್ರಣವೇಶ್ವರ ದೇವಾಲಯದ ಪ್ರಾಂಗಣದಲ್ಲಿ 2013-14ನೇ ಸಾಲಿನಲ್ಲಿ ಕೇಂದ್ರ ಪುರಾತತ್ವ ಇಲಾಖೆಯು ಪ್ರಾಯೋಗಿಕ ಉತ್ಖನನ ಕಾರ್ಯ ಕೈಗೊಂಡಿತ್ತು. ಆಗ ಸಿಂಹ ಕಟಾಂಜನ ರಚನೆ ದೊರೆತಿತ್ತು.ಅದರ ಪಾರ್ಶ್ವಭಾಗದಲ್ಲಿ ಕದಂಬರ ಕಾಲದ ಲಿಪಿ ಗೋಚರಿಸಿದ್ದು, ಅದು ಕನ್ನಡದ ಮೊದಲ ಶಾಸನವಾಗುವ ಲಕ್ಷಣ ಹೊಂದಿದೆ ಎಂದು ತಿಳಿಯಲಾಗಿತ್ತು. ಆ ಉತ್ಖನನ ಕ್ರಿಯೆಯ ಅಧ್ಯಯನ ನಾಯಕತ್ವವನ್ನು   ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯ ಬೆಂಗಳೂರು ವಲಯದ  ಆಗಿನ ಅಧೀಕ್ಷರಾಗಿದ್ದ ಶ್ರೀ Keshava Thirumalai ರವರು  ವಹಿಸಿದ್ದರು. ಶ್ರೀಯುತರ ನಿರಂತರ ಅಧ್ಯಯನ ಹಾಗೂ ಕಾರ್ಯ ಧಕ್ಷತೆಯ ಪರಿಣಾಮವಾಗಿ 20l6 ರ ಕೊನೆಯಲ್ಲಿ ASI ಉತ್ಖನನ ಕ್ರಿಯೆಯ ವರದಿ ಪ್ರಕಟಿಸಿತು. ಆ ರಾಷ್ಟ್ರ ಮಟ್ಟದ ವರದಿಯ  ಮುಖಪುಟವನ್ನು ಆವರಿಸಿದ್ದು ತಾಳಗುಂದದ ಚಿತ್ರ.

ವರದಿಯಲ್ಲಿ  ಉತ್ಖನನದಲ್ಲಿ ಸಿಕ್ಕ ಶಾಸನವು ಕನ್ನಡ ಶಾಸನವಾಗಿದ್ದು ಅದರ ಕಾಲವನ್ನು ಕ್ರಿ.ಶ. 370 ರಿಂದ ಕ್ರಿಶ 400 ಎಂದು ತಿಳಿಸಲಾಗಿತ್ತು. ಅಂದರೆ ಶಾಸನವು ಈಗಿನ ಕನ್ನಡದ ಮೊದಲ ಶಾಸನವಾದ ಹಲ್ಮಿಡಿ ಶಾಸನ (ಕ್ರಿ.ಶ450)ಕ್ಕಿಂತಲೂ ಪೂರ್ವದ ಅವಧಿಯ ಶಾಸನ ಇದು ಎಂದು ತಿಳಿಯಬಹುದು.

ಇತ್ತೀಚಿಗೆ ಬನವಾಸಿಯಲ್ಲಿ ನಡೆದ ಕದಂಬೋತ್ಸವದಲ್ಲಿ ಉತ್ಖನನದ ಅಧ್ಯಯನಕಾರರಾದ ಹಾಗೂ ನಾಡಿನ ಪ್ರಸಿದ್ಧ ಸಂಶೋಧನಾಕಾರರಾದ ಶ್ರೀ ಕೇಶವಸರ್ ರವರು "ಕನ್ನಡದ ಮೊದಲ ಶಾಸನ" ಎಂಬ ಶೀರ್ಷೆಕೆಯಡಿ ಕನ್ನಡ ಭಾಷಾ ಪವಿತ್ರೆಯನ್ನು ಸಾರುವ ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿದರು.

ಶಾಸನದ ಪಾಠ....

............... ವುಸ
.............ತ್ನೋಮಿಯಾ
.....ಕೊಟ್ಟಾರ್ ಪುಲೋನಾಗೇ ಸ್ಕ
..... ಯಾಮಾಂ ಚನ್ದ್ರಾದಿತ್ಯ
ಮೋಗಬೋಯ್ಗರಾ ನಾವಿದಾವಜೀ ನಾಗ (ಣ * )
ಪುಲಿ (ಣ್ಡ * )ಗೆಯಾ ಹಲಮಿ ಕೊಳ್ಳೆ ನಾಲ್ಕುಂ ಮಾಸೇ ತು
........ ಜಾ.... ಮಿ............. ಭೂ

ಸಾರಾಂಶ: ಚಂದ್ರಾದಿತ್ಯನ ಆಡಳಿತ ಕಾಲದಲ್ಲಿ ಕ್ಷೌರಿಕ ವೃತ್ತಿಯ ನಾಗಣ್ಣನಿಗೆ ನಾಲ್ಕು ಮಾಸ ಪರ್ಯಂತ ಅನುಭವಿಸಿಕೊಂಡು ಬರಲು ಪುಲಿಂದಿಗೆಯಲ್ಲಿ ಇನ್ನೂ ಉತ್ತಿರದ ಭೂಮಿಯನ್ನು ದಾನವಾಗಿ ನೀಡಲಾಗಿದೆ.

ಕೆಲವು ಶಾಸನಗಳ ಕಾಲವನ್ನು ಲಿಪಿಯ ಶೈಲಿ, ಭಾಷೆಯ ಆಧಾರದ ಮೇಲೆ ನಿರ್ಧಾರ ಮಾಡಬಹುದು. ಕೆಲವು ಶಾಸನಗಳ ಕಾಲವನ್ನು ಅವುಗಳನ್ನು ಹೊಂದಿಸಿರುವ , ಅಳವಡಿಸಿರುವ ಸ್ಥಳಗಳ ಆಧಾರದ ಮೇಲೆ ನಿರ್ಧರಿಸಲು ಸಾಧ್ಯವಿದೆ, ಆದರೆ ತಾಳಗುಂದದ ಶಾಸನ ತುಸು ಭಿನ್ನವಾಗಿದ್ದು ಸಾಂದರ್ಭಿಕ ಆಧಾರಗಳನ್ನು ಹಾಗೂ ಲಿಪಿಯ ಶೈಲಿಯ ಮೇಲೆ ನಿರ್ಧರಿಸಬೇಕಾಗುತ್ತದೆ.

 ಈ ಶಾಸನದ ಅಕ್ಷರಗಳು ಕದಂಬ ಲಿಪಿಯನ್ನು ಹೋಲುತ್ತವೆ. ಮೇಲ್ನೋಟಕ್ಕೆ ಹಲ್ಮಿಡಿ ಶಾಸನದಂತೆ ಕಾಣುತ್ತವೆ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದಾಗ ಶಾತವಾಹನ ಮತ್ತು ಕದಂಬರ ನಡುವಿನ ಲಿಪಿ ಎಂದು ಅರಿವಾಗುತ್ತದೆ. ಈ ಶಾಸನದ ಕಾಲನಿರ್ಣಯಕ್ಕೆ ಅನೇಕ ಪ್ರಾಚೀನ ಶಾಸನಗಳ ಲಿಪಿಗಳ ವಿನ್ಯಾಸವನ್ನು ಸುಮಾರು ಒಂದು ವರುಷಗಳ ಕಾಲ ಈ ಶಾಸನದ ಲಿಪಿಯೊಂದಿಗೆ ಮತ್ತೆ ಮತ್ತೆ ತುಲನಾತ್ಮಕ ಅಧ್ಯಯನ ಮಾಡಲಾಗಿದೆ. ಶಾಸನ ದೊರಕಿದ ಸ್ಥಳದಲ್ಲಿನ ಮಣ್ಣಿನ ಸ್ಥರಗಳ ಅಧ್ಯಯನ ಹಾಗೂ ದೊರೆತ ನಾಣ್ಯಗಳ ಆಳ ಇಂತಹ ಸೂಕ್ಷ್ಮ ವಿಚಾರಗಳನ್ನು ಸಹ ಕಾಲ ನಿರ್ಣಯಕ್ಕೆ ಪೂರಕವಾಗಿ ಅಧ್ಯಯನ ಮಾಡಲಾಗಿದೆ.

ಎಸ್ . ಪಿ.ವಿ ಹಳಕಟ್ಟಿ ರವರ ಸಂಶೋಧನೆಯ ನರಗುಂದ ತಾಲೂಕಿನ  ವಾಸನದ ಚಂಡಸಿರಿ ಶಾತಕರ್ಣಿಯ ಶಾಸನ (ಕ್ರಿ.ಶ.3ನೇ ಶತಮಾನ)

ಹಿರೇಹಡಗಲಿಯ ಪಲ್ಲವ ಶಿವ ಸ್ಕಂದವರ್ಮನ ಶಾಸನ (ಕ್ರಿ.ಶ.3ನೇ ಶತಮಾನ)

ಸಿರಿ ಪುಲುಮಾವಿಯ ಶಾಸನ (ಕ್ರಿ.ಶ.3 ನೇ ಶತಮಾನ)

ಚಿತ್ರದುರ್ಗದ ತಮಟಕಲ್ಲು ಶಾಸನ (ಕ್ರಿ.ಶ.4ನೇ ಶತಮಾನ))

ಹಲ್ಮಿಡಿ ಶಾಸನ (ಕ್ರಿ.ಶ 450)

ಎರಡನೇ ಪುಲಕೇಶಿಯ ಐಹೊಳೆ ಶಾಸನ (ಕ್ರಿ.ಶ. 634)

ಇದರ ಜೊತೆಗೆ ಕನಗನಹಳ್ಳಿ ಶಾಸನಗಳು ಹಾಗೂ ಮಳವಳ್ಳಿಯ ಶಾಸನಗಳ ಲಿಪಿಗಳೊಂದಿಗೆ ತುಲನಾತ್ಮಕ ಸೂಕ್ಷ್ಮ ಅಧ್ಯಯನ ನಡೆಸಿರುವ ಶ್ರೀ ಕೇಶವ ಸರ್ ರವರು ಈ ಶಾಸನವು ಹಲ್ಮಿಡಿ ಶಾಸನಕ್ಕಿಂತ 50 ರಿಂದ 75 ವರುಷ ಹಿಂದಿನದೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ತಮಟಕಲ್ಲು ಶಾಸನದ ಅಧ್ಯಯನಕಾರರಾದ ಶ್ರೀ ಡಾ.ಬಿ.ರಾಜಶೇಖರಪ್ಪನವರೂ ಸಹ ತಾಳಗುಂದದ ಈ ಶಾಸನ ಖಂಡಿತವಾಗಿ ಅದಕ್ಕಿಂತ (ತಮಟಕಲ್ಲು) ಫೂರ್ವದೆಂದು ಅಭಿಪ್ರಾಯ ತಿಳಿಸಿದ್ದಾರೆ.

ಈ ಶಾಸನದ ಪಾಠ ಸಿದ್ಧಪಡಿಸಲು ಮತ್ತು ಇದರ ಕಾಲ ನಿರ್ಣಯಿಸಲು ಶ್ರೀ ಕೇಶವ ಸರ್ ರವರು ತುಂಬಾ ಅದ್ಭುತ ಶ್ರಮವಹಿಸಿದ್ದಾರೆ.
ಈ ಶಾಸನವು ಏಳು ಸಾಲಿನ ಶಾಸನವಾಗಿದ್ದು ಇದರಲ್ಲಿ ಸ್ಪಷ್ಟ ಕನ್ನಡ ಪದಗಳ ಉಲ್ಲೇಖಗಳಿವೆ. "ಕೊಟ್ಟಾರ್"  "ಬೋಯ್ಗರಾ" " ಪುಲಂದಿಗೆ ''   "ನಾಲ್ಕು" ಮತ್ತು "ಕೊಳ್ಳೆ" ಎಂಬ ಕನ್ನಡ ಪದಗಳ ಜೊತೆಗೆ " ಹಲಮಿ"ಯಂತಹ ಸಂಸ್ಕೃತದ ಪದ ಕೂಡ ಇದೆ.  ಕನ್ನಡ ಪದಗಳು ಹೆಚ್ಚಿರುವ ಈ ಶಾಸನವನ್ನು ವಿಶೇಷ ಆಸಕ್ತಿವಹಿಸಿ,  ಕನ್ನಡದ ಲಿಖಿತ ಇತಿಹಾಸದ ಪೂರ್ವತೆಯನ್ನು ಸುಮಾರು 70 - 80ವರುಷಗಳ ಹಿಂದಿಕ್ಕೆ ಒಯ್ಯುವುದರ ಮೂಲಕ ಕನ್ನಡಿಗರಿಗೆ ಈ ನಾಡಿನ ಸಮಸ್ತ ಸಾಹಿತ್ಯಾಭಿಮಾನಿಗಳಿಗೆ ಈ ನೆಲದ ಪವಿತ್ರತೆಯನ್ನು ತಿಳಿಸಿಕೊಟ್ಟ ಶ್ರೀ ಕೇಶವ ಸರ್ ರವರಿಗೆ ತುಂಬು ಹೃದಯದ ಧನ್ಯವಾದಗಳು